ಶ್ರೀ ಸ್ವಾಮಿ ಶಿವಾನಂದರು

ಶ್ರೀ ಸದ್ಗುರು ಶಿವಾನಂದ ಸ್ವಾಮಿಗಳು (ಮೂಲನಾಮ ಶ್ರೀ ವೀರನಗೌಡರು) ಧಾರವಾಡ ಜಿಲ್ಲೆಯ ರೋಣದಲ್ಲಿ ಸುಮಾರು ಕ್ರಿ. ಶ. 1858ರಲ್ಲಿ ಶ್ರೀಮಂತ ಮನೆತನದಲ್ಲಿ ಜನಿಸಿದರು. ಅವರ ತಂದೆ ತಾಯಿಗಳಾದ ಶ್ರೀ ಲಿಂಗನಗೌಡರು ಮತ್ತು ಬಸವಮ್ಮನವರು ಧಾರ್ಮಿಕ ಶ್ರದ್ಧೆಯುಳ್ಳವರು, ಸದ್ಗುಣಶೀಲರು, ದಯಾಮಯರು ಮತ್ತು ಉದಾರಿಗಳಾಗಿದ್ದರು. ಶ್ರೀ ಶಿವಾನಂದರು ಬಾಲ್ಯಾವಸ್ಥೆಯಲ್ಲಿ ಮೌನಿಗಳಾಗಿದ್ದರು. ಶ್ರೀ ಶಿವಾನಂದರ ಮೌನವು ಅವರ ಒಂಭತ್ತು ವರ್ಷ ವಯಸ್ಸಿನವರೆಗೆ ಮುಂದುವರಿಯಿತು. ಆಗ ಅವರು ತಮ್ಮ ಸ್ವರೂಪದ ಅಭ್ಯಾಸದಲ್ಲಿ ತೊಡಗಿದ್ದರು. ಒಮ್ಮೆ ಶ್ರೀ ನಾಗಲಿಂಗ ಸ್ವಾಮಿಗಳು ಸಮೀಪದ ಬಡಿಗೇರ ಶಾಲೆಯಲ್ಲಿಯ ಬಾಚಿಯನ್ನು ತೆಗೆದುಕೊಂಡು ಅದನ್ನು ಶ್ರೀ ಶಿವಾನಂದರಿಗೆ ತೋರಿಸಿ ಅದರಿಂದ ಶ್ರೀ ಶಿವಾನಂದರ ಶರೀರವನ್ನು ಚೂರುಚೂರಾಗಿ ಕತ್ತರಿಸಿ ಹಾಕುವರೆಂದು ಹೇಳಿದರು. ಆಗ ಶ್ರೀ ಶಿವಾನಂದರು ಎಳ್ಳಷ್ಟೂ ಹೆದರದೆ ತಮ್ಮ ಕುತ್ತಿಗೆಯನ್ನು ಬಗ್ಗಿಸಿ 'ಅದನ್ನು ಬಾಚಿಯಿಂದ ಕಡಿದು ಹಾಕಿರಿ, ಇಲ್ಲದ ವಸ್ತು ಇಲ್ಲದಂತಾಗುತ್ತದೆ' ಎಂದು ಹೇಳಿದರು. ಈ ಘಟನೆಯು ಶ್ರೀ ಶಿವಾನಂದರು ಸಂಪೂರ್ಣ ನಿರ್ಭಯರಾಗಿದ್ದರೆಂಬುದನ್ನು ಸೂಚಿಸುತ್ತದೆ.

ಒಮ್ಮೆ ಶ್ರೀ ಶಿವಾನಂದರು ಮೇವಿನ ಹೊರೆಯನ್ನು ಹೊತ್ತುಕೊಂಡು ಬರುವಾಗ ದಾರಿಯಲ್ಲಿ ಒಮ್ಮೆಲೆ ನಿಂತು ತಮ್ಮೊಳಗೆ ತಾವೇ "ಮೇವಿನ ಹೊರೆಯನ್ನು ಹೊತ್ತುಕೊಂಡು ನಿಂತವರು ಯಾರು? ಇವರನ್ನು ನೋಡುವವರಾರು? ಇದೆಲ್ಲವನ್ನು ನೋಡುವ ಸಾಕ್ಷಿ ಸ್ವರೂಪ ಯಾವುದು?" ಎಂದು ವಿಚಾರ ಮಾಡುತ್ತಿದ್ದರು.

ಶ್ರೀ ಶಿವಾನಂದರಿಗೆ ಬಾಲ್ಯದಲ್ಲಿಯೇ ಅವರ ತಂದೆ-ತಾಯಿಯವರು ವಿವಾಹವನ್ನೆಸಗಿದರು. ಆಗ ಶ್ರೀ ಶಿವಾನಂದರು ಆ ಲಗ್ನವನ್ನು ವಿರೋಧಿಸಿದರು. ತಮ್ಮ ತಂದೆ-ತಾಯಿಯವರಿಗೆ "ಈಗ ನನ್ನೊಡನೆ ಲಗ್ನ ಮಾಡಿರುವ ಹುಡುಗಿಯು ಬೇಗನೆ ಸತ್ತು ಹೋಗುತ್ತದೆ" ಎಂದರು. ಅವರು ನುಡಿದಂತೆ ಆಕೆಯು ಅಲ್ಪಕಾಲದಲ್ಲಿಯೇ ಮೃತಳಾದಳು. ಇದರಿಂದ ಅವರಿಗೆ ಭವಿಷ್ಯತ್ತಿನ ಘಟನೆಗಳು ತಿಳಿಯುತ್ತಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಅವರು ಸ್ವರೂಪ ಅಭ್ಯಾಸದ ತಪಸ್ಸನ್ನಲ್ಲದೆ ಸಿದ್ಧಿ ತಪಸ್ಸನ್ನೂ ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ್ದರೆಂದು ಕಂಡುಬರುತ್ತದೆ.

ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಸ್ವಲ್ಪ ಮಟ್ಟಿಗೆ ಇಂಗ್ಲೀಷ ಭಾಷೆಯ ಅಭ್ಯಾಸ ಮಾಡಿದರು. ನಂತರ ಅವರು ಡೋಣಿ ಡಂಬಳ ಸಮೀಪದ ಹಳ್ಳಿಗಳಲ್ಲಿ ಮತ್ತು ನವಲಗುಂದ ತಾಲೂಕಿನ ಸೊಟಕನಹಾಳ ಗ್ರಾಮದಲ್ಲಿ ಕೆಲವು ವರ್ಷಗಳವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು. ಆಗಲೂ ಕೂಡ ಅವರು ಯಾವಾಗಲೂ ತಮ್ಮ ಸ್ವರೂಪದ ಆನಂದದಲ್ಲಿಯೇ ಮಗ್ನರಾಗಿರುತ್ತಿದ್ದರು. ನಂತರ ಅವರಿಗೆ ಆತ್ಮಜ್ಞಾನಿ ಮಹಾತ್ಮರಾದ ಬನಹಟ್ಟಿಯ ಶ್ರೀ ರುದ್ರಸ್ವಾಮಿಗಳ ದರ್ಶನವಾಯಿತು. ಮೇಲಿಂದ ಮೇಲೆ ಪರಸ್ಪರರಲ್ಲಿ ತತ್ವ ವಿಚಾರದ ಬಗ್ಗೆ ಸಂಭಾಷಣೆಯು ನಡೆಯುತ್ತಿತ್ತು.

ಸಾಮಾನ್ಯವಾಗಿ ಅವರು ಸೊಟಕನಹಾಳ ಗ್ರಾಮದ ಸಮೀಪದಲ್ಲಿರುವ ಬೆಣ್ಣಿ ಹಳ್ಳಕ್ಕೆ ಸ್ನಾನಕ್ಕಾಗಿ ಹೋಗುತ್ತಿದ್ದರು. ಆ ಬೆಣ್ಣಿ ಹಳ್ಳದಲ್ಲಿ ಅತಿ ಆಳವಾದ ತಿರುಗಣಿ ಮಡುವು ಇತ್ತು. ಅಕಸ್ಮಾತಾಗಿ ಒಮ್ಮೆ ಶ್ರೀ ಶಿವಾನಂದರು ಆ ತಿರುಗಣಿ ಮಡುವಿನಲ್ಲಿ ಸಿಕ್ಕು ಬಿದ್ದರು. ಆ ತಿರುಗಣಿ ಮಡುವಿನಲ್ಲಿ ಸಿಕ್ಕ ಎತ್ತುಗಳು, ಎಮ್ಮೆಗಳು, ಕರುಗಳು ಮತ್ತು ವ್ಯಕ್ತಿಗಳು ಕ್ವಚಿತ್ತಾಗಿ ಪಾರಾಗುತ್ತಿದ್ದವು. ಆದರೆ ಶ್ರೀ ಶಿವಾನಂದರು ಆ ತಿರುಗಣಿ ಮಡುವಿನಿಂದ ದೈವಾನುಕೂಲದಿಂದ ಹೊರಚಿಮ್ಮಿದಂತಾಗಿ ಪಾರಾದರು. ಇದನ್ನು ಜನರು ಶಿವಾನಂದರ ಪವಾಡವೆಂದೇ ತಿಳಿದರು.

ನಂತರ ಶ್ರೀ ಶಿವಾನಂದರನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ಸಂಸ್ಥಾನದ ಮನಿಹಾಳ ಗ್ರಾಮದ ಪಾಟೀಲ ಮನೆತನದ ಶ್ರೀ ಶಿವಾನಂದರ ಸಮೀಪದ ಸಂಬಂಧಿಕರಾದ ವಿಧವೆಯು ಅವರನ್ನು ದತ್ತಕ ಪುತ್ರರನ್ನಾಗಿ ಮಾಡಿಕೊಂಡರು. ಆದ್ದರಿಂದ ಶ್ರೀ ಶಿವಾನಂದರು ಮನಿಹಾಳ ಗ್ರಾಮಕ್ಕೆ ಹೋದರು. ಅಲ್ಲಿ ಅವರು ಹನ್ನೊಂದು-ಹನ್ನೆರಡು ವರ್ಷಗಳವರೆಗೆ ಪೋಲೀಸ ಪಾಟೀಲರಾಗಿ ಕೆಲಸ ಮಾಡಿದರು. ಅಲ್ಲಿ ಅವರು ತಮ್ಮ ಪೋಲೀಸ ಪಾಟೀಲರ ಕೆಲಸವನ್ನು ಯಾವುದೇ ಹಣ, ಕೀತರ್ಿ, ಅಧಿಕಾರದ ಆಮಿಷವಿಲ್ಲದೆ ಸ್ವಾರ್ಥತ್ಯಾಗದಿಂದ ಜನರ ಕಲ್ಯಾಣಕ್ಕಾಗಿ ನಿರ್ವಹಿಸಿದರು. ಈ ಕಾಲಕ್ಕೆ ಅವರು ಯಾವಾಗಲೂ ಸ್ವರೂಪಾನಂದದಲ್ಲಿಯೇ ಮಗ್ನರಾಗಿರುತ್ತಿದ್ದರು. ಅವರ ದಿನನಿತ್ಯದ ಕೆಲಸವು ಹೀಗಿತ್ತು. ಅವರು ತಮ್ಮ ರಾತ್ರಿಯ ಗಸ್ತಿ ತಿರುಗುವ ಕೆಲಸವನ್ನು ಮುಗಿಸಿಕೊಂಡು ಬೆಳಗು ಮುಂಜಾನೆ ಮನಿಹಾಳ ಗ್ರಾಮದ ಸಮೀಪದಲ್ಲಿರುವ ಮನಿಗೇರಮ್ಮನ ಗುಡ್ಡದ ಮೇಲೆ ಹೋಗಿ ತಮ್ಮ ಸ್ವರೂಪಾನಂದದಲ್ಲಿ ಮಗ್ನರಾಗುತ್ತಿದ್ದರು. ಆ ಮನಿಗೇರಮ್ಮನ ಗುಡ್ಡವು ಅನೇಕ ಮುಳ್ಳು ಕಂಟಿಗಳಿಂದ ಗಿಡಗಳಿಂದ ಆವರಿಸಿತ್ತು. ಅಲ್ಲಿ ಅನೇಕ ಮಾಂಸಾಹಾರಿ ಪ್ರಾಣಿಗಳು ಮತ್ತು ದೇಶಿ ಹುಲಿಗಳಿಂದ ಅಥವಾ ಚಿರತೆಗಳಿಂದ ಕೂಡಿದ ಕಾಡುಮೃಗಗಳಿದ್ದವು. ಶ್ರೀ ಶಿವಾನಂದರು ಅವುಗಳಿಗೆ ಹೆದರುತ್ತಲೇ ಇರಲಿಲ್ಲ.

ಅವರು ಶಂಭುಲಿಂಗ ಬೆಟ್ಟದ ಶ್ರೀಮನ್ ನಿಜಗುಣಾರ್ಯರ ಗ್ರಂಥಗಳ ಅರ್ಥವಿವರಣೆ ಮಾಡುತ್ತಿದ್ದರು.

ಶ್ರೀ ಶಿವಾನಂದರ ತಂದೆ ತಾಯಿಯವರು ಅವರಿಗೆ ಎರಡನೆ ವಿವಾಹವನ್ನೆಸಗಿದರು. ಅವರಿಗೆ 1904ರಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಶ್ರೀ ಲಿಂಗನಗೌಡ ಎಂದು ನಾಮಕರಣ ಮಾಡಿದರು. ಆದರೆ ಶ್ರೀ ಶಿವಾನಂದರು ಯಾವುದೇ ಬಾಧೆಯಿಲ್ಲದೆ ತಮ್ಮ ಪೋಲೀಸಪಾಟೀಲಕಿ ಕರ್ತವ್ಯವನ್ನು ನೀರಿನಲ್ಲಿಯ ಕಮಲದೆಲೆಯಂತೆ ನಿರ್ವಹಿಸುತ್ತಿದ್ದರು.

ಶ್ರೀ ಶಿವಾನಂದರು ಒಮ್ಮೆ ಅತಿ ಮಳೆಯಾದಾಗ ತಮ್ಮ ಮನೆಯಲ್ಲಿಯೇ ನಿತ್ಯದಂತೆ ಸ್ವರೂಪಾನಂದದ ಧ್ಯಾನದಲ್ಲಿ ಕುಳಿತಿದ್ದರು. ಅವರ ಧ್ಯಾನ ಮುಗಿಯುವವರೆಗೆ ಆಗ ಕೆಂಜಿಗೆಗಳು ಅವರ ದೇಹದ ಚರ್ಮವನ್ನು ಕಡಿಯುತ್ತಿದ್ದವು. ಆದರೆ ಅವುಗಳ ಕಡಿತದ ಭಾನವೇ ಅವರಿಗೆ ಇರಲಿಲ್ಲ. ಯಾವಾಗ ಅವರು ಆ ಸ್ಥಿತಿಯಿಂದ ಉತ್ಥಾನವಾದರೋ ಆಗ ಅವರಿಗೆ ಕೆಂಜಿಗೆಗಳ ಕಡಿತದ ಅರಿವಾಗತೊಡಗಿತು. ನಂತರ ಅವರ ತಂಗಿಯವರಾದ ಶ್ರೀಮತಿ ಯಲ್ಲಮ್ಮನವರು ಅವರ ಮೈಮೇಲಿನ ಕೆಂಜಿಗೆಗಳನ್ನು ಕೊಡವಿಹಾಕಿ ನೋಡಲಾಗಿ ಶ್ರೀ ಶಿವಾನಂದರ ದೇಹದ ಚರ್ಮವು ಪರಟೆಗಟ್ಟಿತ್ತು.

ಮನಿಹಾಳ-ಸೂರೇಬಾನದಿಂದ ಎರಡು ಮೈಲುಗಳ ದೂರದಲ್ಲಿ ಗುಡ್ಡದ ಬದಿಗೆ ಶಬರಿ ದೇವಾಲಯವಿದೆ. ಅಲ್ಲಿ ಒಂದು ಕೊಳ್ಳವು ಇದೆ. ಶ್ರೀ ಶಿವಾನಂದರು ವಿಜಯದಶಮಿ ಹಬ್ಬದ ದಿನಗಳಲ್ಲಿ ಆ ಶಬರಿ ದೇವಾಲಯದಲ್ಲಿ ಆತ್ಮಧ್ಯಾನಕ್ಕಾಗಿ ಕುಳಿತರು. ಅವರು ಪ್ರತಿದಿನ ಮುಂಜಾನೆ ಮೂರು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆಯವರೆಗೆ ಹೀಗೆ ಹದಿನೆಂಟು ತಾಸುಗಳ ಕಾಲ ಪದ್ಮಾಸನದಲ್ಲಿ ಕುಳಿತು ಧ್ಯಾನಮಗ್ನರಾಗುತ್ತಿದ್ದರು. ಕಡೆಯದಿನ ಅವರು ಲಘು ಶಂಕಾದಿಗಳನ್ನು ತೀರಿಸಿಕೊಂಡು ದೇವಾಲಯದ ಬದಿಗಿರುವ ಹೊಂಡದಲ್ಲಿ ಸ್ನಾನ ಮಾಡುವದಕ್ಕೆ ಹೋಗುವಾಗ ದೇವಾಲಯದ ಮುಂಭಾಗದ ಮೇಲ್ಛಾವಣಿಯ ಮೇಲೆ ಒಂದು ಭಯಾನಕ ರಾಕ್ಷಸವು ಕುಳಿತದ್ದನ್ನು ಕಂಡರು. ಆದರೆ ಯಾವುದೇ ಬಾಧೆಯನ್ನು ಹೊಂದದೆ ನಿರ್ಭಯರಾಗಿದ್ದರು. ಅವರು ಆ ದೃಶ್ಯವನ್ನು ಲಕ್ಷಿಸದಂತೆ ನೇರವಾಗಿ ಹೊಂಡಕ್ಕೆ ದಿನನಿತ್ಯದಂತೆ ಸ್ನಾನವನ್ನು ಮುಗಿಸಿಕೊಂಡು ಮರಳಿ ದೇವಾಲಯಕ್ಕೆ ಬಂದು ಧ್ಯಾನಕ್ಕಾಗಿ ಪದ್ಮಾಸನದಲ್ಲಿ ಕುಳಿತರು. ಆಗ ಇಬ್ಬರು ಶುಭ್ರವಸ್ತ್ರಧಾರಿಗಳಾದ ದೇವತೆಗಳು ಅವರ ಸಮ್ಮುಖದಲ್ಲಿ ಬಂದು ನಿಂತರು. ಅವರಲ್ಲೊಬ್ಬರು ಶ್ರೀಶಿವಾನಂದರಿಗೆ ಅವರ ಹೆಸರೇನು? ಅವರು ಎಲ್ಲಿಯವರು? ಇಂಥ ನಿರ್ಜನ ಪ್ರದೇಶದಲ್ಲಿ ಏಕೆ ಇರುವರು? ಎಂದು ಕೇಳಿದರು. ಅದಕ್ಕೆ ಶ್ರೀ ಶಿವಾನಂದರು "ನಾನಾರು ಎಂದು ಹೇಳಲು ಬರುವದಿಲ್ಲವೆಂದ ಮೇಲೆ ನಾನು ಏನು ಹೇಳಲಿ! ನನ್ನ ನಿಜಾನುಸರಣೆಯಲ್ಲಿಯೇ ಇಲ್ಲಿ ಇದ್ದೇನೆ. ಲೌಕಿಕದಲ್ಲಿ ನಾನು ಈ ದೇವಾಲಯದ ಸಮೀಪದಲ್ಲಿರುವ ಮನಿಹಾಳ ಗ್ರಾಮದ ಅಧಿಪತಿ ಇದ್ದೇನೆ." ಎಂದು ಹೇಳುವಷ್ಟರಲ್ಲಿಯೇ ಅವರೀರ್ವ ದೇವತೆಗಳು ಶ್ರೀ ಶಿವಾನಂದರಿಗೆ ತಲೆಬಾಗಿ ನಮಸ್ಕರಿಸಿ ಶುಭಕೋರಿ ಅವರು ಒಬ್ಬ ಶ್ರೇಷ್ಠ ಮಹಾತ್ಮರಿದ್ದಾರೆಂದು ಹೇಳಿ ಅಂತಧರ್ಾನರಾದರು.

ಒಮ್ಮೆ ರಾಮದುರ್ಗ ಸಂಸ್ಥಾನದ ಶ್ರೀಮಾನ್ ರಾಜಾಸಾಹೇಬರು ಮನಿಗೇರಮ್ಮನ ಗುಡ್ಡದ ಮೇಲೆ ತಮ್ಮ ಸರಂಜಾಮದೊಡನೆ ವಿಹಾರಕ್ಕೋಸ್ಕರವಾಗಿ ಹೋದಾಗ ಅಲ್ಲಿ ಶ್ರೀ ಶಿವಾನಂದರು ಆತ್ಮಾನಂದದಲ್ಲಿ ತಲ್ಲೀನರಾದದ್ದನ್ನು ಕಂಡರು. ಅವರ ಬಗ್ಗೆ ತಮ್ಮ ಅನುಚರರಲ್ಲಿ ವಿಚಾರಿಸಲಾಗಿ ಶ್ರೀ ಶಿವಾನಂದರು ಮನಿಹಾಳ ಗ್ರಾಮದ ಪೋಲೀಸಪಾಟೀಲರಾದ ಶ್ರೀ ವೀರನಗೌಡರು ಮತ್ತು ಅವರು ಋಷಿಜೀವನ ನಡೆಸುತ್ತಿರುವದರ ಬಗ್ಗೆ ತಿಳಿಯಿತು. ಅದನ್ನು ಪರಿಕ್ಷಿಸಲೋಸುಗ ಶ್ರೀಮಾನ್ ರಾಜಾಸಾಹೇಬರು ಶ್ರೀ ಶಿವಾನಂದರ ಸಮೀಪ ಹಾಯ್ದುಹೋಗುವಂತೆ ತಮ್ಮ ಬಂದೂಕಿನಿಂದ ಗುಂಡನ್ನು ಹಾರಿಸಿದರು. ಆದರೆ ಶ್ರೀ ಶಿವಾನಂದರು ಆತ್ಮಾನುಭವದಲ್ಲಿ ತಲ್ಲೀನರಾದದ್ದರಿಂದ ಯಾವುದೇ ಬಾಧೆಯನ್ನು ಹೊಂದದೆ ಬಂಡೆಗಲ್ಲಿನಂತೆ ಅಚಲರಾಗಿ ಕುಳಿತಿದ್ದರು. ಶ್ರೀಮಾನ್ ರಾಜಾಸಾಹೇಬರು ಆ ದಿನ ಮನಿಹಾಳ ಗ್ರಾಮದಲ್ಲಿಯೇ ಮುಕ್ಕಾಂ ಮಾಡಿದರು. ಶ್ರೀ ಶಿವಾನಂದರು ಸಾಯಂಕಾಲ ಶ್ರೀಮಾನ್ ರಾಜಾಸಾಹೇಬರನ್ನು ಭೆಟ್ಟಿಯಾದರು. ಆಗ ಶ್ರೀಮಾನ್ ರಾಜಾಸಾಹೇಬರು "ಇಂದು ಮುಂಜಾನೆ ನೀವು ಎಲ್ಲಿ ಇದ್ದಿರಿ ಮತ್ತು ಏನು ಮಾಡುತ್ತಿದ್ದಿರಿ? ಎಂದು ಕೇಳಿದರು. ಶ್ರೀ ಶಿವಾನಂದರು ತಾವು ಮುಂಜಾನೆ ಮನಿಗೇರಮ್ಮನ ಗುಡ್ಡದ ಮೇಲೆ ಆತ್ಮಾನಂದಾನುಭವದಲ್ಲಿ ಇದ್ದೆನು ಎಂದು ಹೇಳಿದರು." ತಾವು ಅಲ್ಲಿ ಆತ್ಮನಂದಾನುಭವದಲ್ಲಿ ಕುಳಿತಾಗ ಏನಾದರೂ ಘಟನೆಗಳು ಸಂಭವಿಸಿದವೇನು?" ಶ್ರೀ ಶಿವಾನಂದರು:- ಇದೇನು ವಿಚಿತ್ರ ಪ್ರಶ್ನೆ! ಆತ್ಮನಂದಾನುಭವದಲ್ಲಿ ಮಗ್ನರಾದವರಿಗೆ ಬಾಹ್ಯದ ಯಾವುದೇ ಘಟನೆಗಳಾಗಲಿ ಅಥವಾ ಮನಸ್ಸಿನೊಳಗೆ ಅವುಗಳ ನೆನಪಾಗಲಿ ಹೇಗೆ ಗುರುತಾಗಬಲ್ಲವು !
ಒಮ್ಮೆ ಶ್ರೀ ಶಿವಾನಂದರು ಮನಿಗೇರಮ್ಮನ ಗುಡ್ಡದ ಮೇಲೆ ಕುಳಿತು ಸ್ವರೂಪಾನಂದದಲ್ಲಿ ತಲ್ಲೀನರಾದಾಗ ಒಂದು ನಾಗರ ಹಾವು ಅವರ ತೊಡೆಯ ಮೇಲೆ ಏರಿ ಹೆಡೆ ಎತ್ತಿ ಆಟವಾಡುತಿತ್ತು. ಆದರೆ ಶ್ರೀ ಶಿವಾನಂದರು ಯಾವುದೇ ಬಾಧೆಯನ್ನು ಹೊಂದದೆ ಅಚಲವಾದ ಬಂಡೆಗಲ್ಲಿನಂತಿದ್ದರು.
ಕೆಲವು ಕಾಲದ ನಂತರ ಶ್ರೀ ಶಿವಾನಂದರು ಮೈಸೂರ ಸಮೀಪದ ಶಂಭುಲಿಂಗನ ಬೆಟ್ಟದಲ್ಲಿ ತಮ್ಮ ಸ್ವರೂಪಾನಂದದಲ್ಲಿ ಇರಬೇಕೆಂದು ಬಯಸಿ ಮನಿಹಾಳ ಗ್ರಾಮವನ್ನು ಬಿಟ್ಟು ಆ ಕಡೆಗೆ ಹೋಗುವಾಗ ನವಲಗುಂದದಲ್ಲಿ ಅವರ ನಾಗನೂರ ಮತ್ತು ಸೊಟಕನಹಾಳ ಗ್ರಾಮಗಳ ಶಿಷ್ಯರು ಶ್ರೀ ಗೂಳಪ್ಪ ಹೊಳೆಯಣ್ಣವರ ಇವರೊಡನೆ ಭೆಟ್ಟಿಯಾದರು. ಅವರು ನಾಗನೂರ ಗ್ರಾಮಕ್ಕೆ ಬರಬೇಕೆಂದು ಹಟ ಹಿಡಿದು 1905 ನೇ ಇಸ್ವಿಯಲ್ಲಿ ಅವರನ್ನು ನಾಗನೂರಿಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ಮಠವನ್ನು ಕಟ್ಟಿಸಿದರು. ಶ್ರೀ ಶಿವಾನಂದರು ಆ ಮಠದಲ್ಲಿ ತಮ್ಮ ಸ್ವರೂಪಾನಂದಾನುಭವದಲ್ಲಿ ತಲ್ಲೀನರಾಗಿರುತ್ತಿದ್ದರು. ಒಮ್ಮೊಮ್ಮೆ ಈ ಸ್ಥಿತಿಯು ಎರಡು-ಮೂರು ದಿನಗಳವರೆಗೆ ಆಹಾರವಿಲ್ಲದೆ ಸಾಗುತ್ತಿತ್ತು. ಆ ಸ್ಥಿತಿಯಲ್ಲಿ ಪಂಚ ಜ್ಞಾನೇಂದ್ರಿಯಗಳ ಯಾವುದೇ ಬಾಹ್ಯ ಕ್ರಿಯೆಗಳು ನಡೆಯುತ್ತಿರಲಿಲ್ಲ. ಅವರ ಕಣ್ಣುಗಳು ಅಗಲವಾಗಿ ತೆರದೇ ಇದ್ದವು ಮತ್ತು ಅವರ ಮನಸ್ಸು ತೂರ್ಯಸ್ಥಿತಿಯಲ್ಲಿ ಇತ್ತು. ಅವರ ಕಣ್ಣುಗಳು ಅಗಲವಾಗಿ ತೆರದೇ ಇದ್ದರೂ ಯಾವುದೇ ಬಾಹ್ಯ ತಿಳವಳಿಕೆಯು ಇರಲಿಲ್ಲ.
ಒಮ್ಮೆ ಶ್ರೀ ಶಿವಾನಂದರು ತೂರ್ಯಸ್ಥಿತಿಯಲ್ಲಿದ್ದಾಗ ಅವರ ದೇಹವು ಅವರು ಕುಳಿತಲ್ಲಿಂದ ಹೊರಗೆ ನಡೆದು ನಾಗನೂರು ಗ್ರಾಮದ ಹಳೆಯ ಕೆರೆಯ ಸುತ್ತಮುತ್ತಲಿರುವ ಮುಳಗಳ್ಳಿ ಮತ್ತು ಡಬಗಳ್ಳಿಯೊಳಗೆ ಅವರಿಗೆ ಗುರುತಿಲ್ಲದಂತೆ ಪ್ರವೇಶಿಸಿತು. ಎಷ್ಟೋ ಗಂಟೆಗಳ ನಂತರ ಶ್ರೀ ಶಿವಾನಂದರು ಹೇಗೋ ಹೊರಗೆ ಬಂದು ಬಿಟ್ಟಿದ್ದರು. ಆದರೆ ಅವರ ದೇಹಕ್ಕೆ ಒಂದು ಮುಳ್ಳೂ ಸಹ ಬಾಧೆಯನ್ನು ಕೊಟ್ಟಿರಲಿಲ್ಲ. ಇದನ್ನು ಕಂಡು ಎಲ್ಲರೂ ಆಶ್ಚರ್ಯಪಟ್ಟರು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಗಳು ಶ್ರಾವಣ ಮಾಸದಲ್ಲಿ ಮತ್ತು ಮಾಹಾಶಿವರಾತ್ರಿಯ ಕಾಲಕ್ಕೆ ಶ್ರೀ ಶಿವಾನಂದರನ್ನು ನಾಗನೂರಿನಿಂದ ತಮ್ಮ ಮಠಕ್ಕೆ ಕರೆಯಿಸಿಕೊಳ್ಳುತ್ತಿದ್ದರು. ಆಗ ಶ್ರೀ ಶಿವಾನಂದರು ಮೇಲಿಂದ ಮೇಲೆ ತೂರ್ಯಸ್ಥಿತಿಯನ್ನು ಹೊಂದುತ್ತಿದ್ದರು. ಕೆಲವೊಂದು ಸಲ ಈ ತೂಯರ್ಾವಸ್ಥೆಯು ಎರಡು-ಮೂರು ದಿನಗಳವರೆಗೆ ಮುಂದುವರಿಯುತ್ತಿತ್ತು. ಶ್ರೀ ಶಿವಾನಂದರ ಇಂಥ ಸ್ಥಿತಿಯನ್ನು ನೋಡಿ ಶ್ರೀ ಸಿದ್ಧಾರೂಢಸ್ವಾಮಿಗಳು ಹೀಗೆ ಹೇಳಿದರು. "ಶ್ರೀ ಶಿವಾನಂದರೆಂದರೆ ಜೋಡು ಕೊಡಗಳನ್ನು ಹೊತ್ತವರು ಅಂದರೆ ಅವರು ಪರಿಪೂರ್ಣ ಅಧ್ಯಾತ್ಮವನ್ನು ಸಾಧಿಸಿದರು ಮತ್ತು ಅದರ ಜೊತೆಗೆ ವ್ಯವಹಾರಿಕ ಜಾಗ್ರ ಪ್ರಪಂಚದ ವ್ಯವಹಾರವನ್ನು ನೀತಿಯುಕ್ತವಾಗಿ ಸಾಗಿಸಿದರು". ಶ್ರೀ ಸಿದ್ಧಾರೂಢರ ಶಿಷ್ಯರು ಶ್ರೀ ಸಿದ್ಧಾರೂಢರನ್ನು ಹಾಗೂ ಶ್ರೀ ಶಿವಾನಂದರನ್ನು ಒಂದು ಸಲ ಶ್ರಾವಣ ಮಾಸದಲ್ಲಿ ತೆಪ್ಪದ ತೇರಿನಲ್ಲಿ ಕೂಡ್ರಿಸಿ ಉತ್ಸವ ಮಾಡಿಸಿದರು.
ಶ್ರೀ ಶಿವಾನಂದರು ಗದಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶಿಷ್ಯರ ಇಚ್ಛೆಗನುಸಾರವಾಗಿ ಗದುಗಿನಲ್ಲಿರಲು ಅಲ್ಲಿಗೆ ಹೋದರು. ಅವರು ದಿನಾಲು ಆತ್ಮಧ್ಯಾನದಲ್ಲಿ ಆತ್ಮಾನಂದವನ್ನು ಅನುಭವಿಸುತ್ತಿದ್ದರು. ಅಲ್ಲದೆ ದಿನಾಲು ತಮ್ಮ ಶಿಷ್ಯರಿಗೆ ಮೂರು ವೇಳೆ ಆತ್ಮಾನಂದದ ಕುರಿತು ಪ್ರವಚನಗೈಯುತ್ತಿದ್ದರು. ಗದುಗಿನ ಮಠದ ಬದಿಯಲ್ಲಿಯ ಹೊಲದಲ್ಲಿ ಒಂದು ಬಾವಿಯನ್ನು ಕಡಿದರು. ಶ್ರೀ ಶಿವಾನಂದರು ಲೀಲಾಯಮಾನವಾಗಿ ತಮ್ಮ ಶಿಷ್ಯರೊಡನೆ ಬಾವಿಯನ್ನು ಕಡಿದರು. ನಂತರ ಅವರು ಅಸ್ವಸ್ಥರಾದರು. ಆಗ ಅವರಿಗೆ ಹೇಗೋ ವಿಷಪ್ರಾಷನವಾಯಿತು. ವಿಷದ ಬಾಧೆಯು ಅತಿಯಾಗಿ ಅವರನ್ನು ವಿಶ್ರಾಂತಿಗಾಗಿ ಮತ್ತು ಗುಣಪಡಿಸುವದಕ್ಕಾಗಿ ನಾಗನೂರಿಗೆ ಕರೆದುಕೊಂಡು ಹೋಗಲಾಯಿತು. ಶ್ರೀ ಶಿವಾನಂದರು ಇಂಥ ಸಹಿಸಲಾರದ ಬಾಧೆಯ ಸ್ಥಿತಿಯಲ್ಲಿದ್ದರೂ ಕೂಡ ಆತ್ಮ ವಿಷಯ ಕುರಿತು ಉಪದೇಶಿಸಿದರು. ಅವರ ಆತ್ಮ ಬೋಧನೆಯು ಎಲ್ಲ ಸಂಪ್ರದಾಯ, ಜಾತಿ ಮತಗಳನ್ನು ಮೀರಿತ್ತು. ಗದಗಿನಲ್ಲಿ ಅವರ ಶರೀರದ ಆಸ್ವಸ್ಥತೆಯು ಜೋರಾಯಿತು. ಆ ಸ್ಥಿತಿಯಲ್ಲಿಯೂ ಕೂಡ ಅವರು ಸುಖವಾಗಿಯೂ ಶಾಂತವಾಗಿಯೂ ಇದ್ದರು. ಅವರ ಕಣ್ಣುಗಳು ಅಗಲವಾಗಿ ಅಚಲವಾಗಿ ತೆರದೇ ಇದ್ದವು. ಇದು ಅವರ ದಿನನಿತ್ಯದ ಆತ್ಮಧ್ಯಾನದ ಸ್ಥಿತಿಯನ್ನು ಸೂಚಿಸುತ್ತಿತ್ತು. ಅವರು ತಮಗೆ 80 ವರ್ಷಗಳ ವಯಸ್ಸಾದಾಗ ಅಧಿಕ ಶ್ರಾವಣ ಮಾಸದ 1939ರ ಜುಲೈ ಒಂದರಂದು ಬ್ರಾಹ್ಮೀ ಮುಹೂರ್ತದಲ್ಲಿ ದೇಹ ತ್ಯಾಗವನ್ನು ಮಾಡಿ ಭಾವರಹಿತ ಪರಮಾತ್ಮರಾಗಿ ಉಳಿದರು. ಶ್ರೀ ಶಿವಾನಂದರ ಉಪದೇಶದ ಸಾರವು ಕೆಳಗಿನಂತಿದೆ. ಆತ್ಮ ವಿದ್ಯೆಯಲ್ಲಿ ಪವಾಡ ಸಿದ್ಧಿಗಳಿಗೆ ಯಾವ ಬೆಲೆಯೂ ಇಲ್ಲ, ಅವೆಲ್ಲವೂ ವ್ಯಾವಹಾರಿಕ ಜಾಗ್ರಾವಸ್ಥೆಗೆ ಮಾತ್ರ ಸೀಮಿತವಾದವು. ಗಾಢನಿದ್ರೆಯಲ್ಲಿ ಅವುಗಳಿಗೆ ಸ್ಥಾನವೇ ಇಲ್ಲ, ಅಂದ ಮೇಲೆ ತೂಯರ್ಾವಸ್ಥೆಯಲ್ಲಿ ಅವುಗಳಿಗೆ ಯಾವ ಸ್ಥಾನವಿದ್ದೀತು? ವಿಷಯೇಂದ್ರಿಯ ಸಂಪರ್ಕ ಭೋಗದ ಸ್ಥಿತಿಯಲ್ಲಿ ಅನುಭವಕ್ಕೆ ಬಂದ ಅನಂದವು ತನ್ನ ಸ್ವರೂಪಾನಂದವೇ ಆಗಿದೆ, ಆದರೆ ಅದು ವಿಷಯಗಳದ್ದಲ್ಲ, ವಿಷಯೇಂದ್ರಿಯ ಸಂಪರ್ಕವಾದಾಗ ಮನಸ್ಸು ನಿಶ್ಚಲವಾಗಿ ಸ್ವರೂಪದ ಆನಂದವೇ ಪ್ರತಿಫಲನವಾಗಿ ಅನುಭವಕ್ಕೆ ಬರುವದು. ಆನಂದವು ಅನುಭವಕ್ಕೆ ಬಂದಾಗ ಯಾವುದೇ ವಿಷಯಗಳು ಇರುವದಿಲ್ಲ, ಆಗ ಬರೇ ಆನಂದವೇ ಇರುವದು. ಶಬ್ದಗಳಿಗೆ ತಮ್ಮದೇ ಆದ ಶಕ್ತಿ ಇಲ್ಲ. ಮನಸ್ಸೇ ಜ್ಙಾನದ ಮೂಲಕ ಅವುಗಳಿಗೆ ಶಕ್ತಿ ಕೊಡುವದು. ಶಬ್ದಗಳು ಜಡವಿವೆ, ಅವು ತಮ್ಮಷ್ಟಕ್ಕೆ ತಾವೇ ಏನೂ ಮಾಡಲಾರವು. ಮನೋಬಲವೇ ಅವುಗಳಿಗೆ ಬಲಕೊಡುವದು. ಶ್ರೇಷ್ಠವಾದ ಪೂಜೆಯೆಂದರೆ ತನ್ನ ಆನಂದ ಸ್ವರೂಪದಲ್ಲಿ ವಿವೇಕ, ವೈರಾಗ್ಯ ಮತ್ತು ಸ್ವರೂಪದ ಅಭ್ಯಾಸದ ಮೂಲಕ ನೆಲೆಯಾಗಿ ನಿಲ್ಲುವದು, ಸ್ವಾರ್ಥ ತ್ಯಾಗದ ಮೂಲಕ ಜೀವಿಗಳನ್ನು ಸಂತೋಷಗೊಳಿಸುವದು ಸಾಮಾನ್ಯ ಪೂಜೆ. ಶಾಶ್ವತ ಸುಖವನ್ನು ಹೊಂದಲು ನಾಮ ರೂಪ ಕ್ರಿಯೆಗಳನ್ನು ತೆಗೆದು ಹಾಕಿ ಸಚ್ಚಿದಾನಂದವನ್ನು ಅನುಸಂಧಾನ ಮಾಡಬೇಕು. ಅಧ್ಯಾತ್ಮಿಕ ಪ್ರವಚನಗಳು ಮಾನವರನ್ನು ವಿಷಯಗಳ ಮೋಹದಿಂದ ಬಿಡಿಸಿ ಆತ್ಮಾನಂದದ ಅನುಭವದಲ್ಲಿ ನೆಲೆಯಾಗಿ ನಿಲ್ಲುವಂತೆ ಮಾಡುವದಕ್ಕಾಗಿ ಇವೆ. ವಿಕಾರಿಯಾದ ಮತ್ತು ನಾಶವಂತವಾದ ದೇಹವೇ ತಾನೆಂದು ಯಾವನು ತಿಳಿದುಕೊಳ್ಳುವನೋ ಅವನೇ ಭವಿಯು. ಅವಿಕಾರಿಯಾದ ಅವಿನಾಶಿಯಾದ ಸಚ್ಚಿದಾನಂದವೇ ತಾನೆಂದು ಯಾವನು ತಿಳಿದುಕೊಳ್ಳುವನೋ ಅವನೇ ಅಭವನು. ಆತ್ಮಜ್ಞಾನವಿಲ್ಲದವನೇ ಭವಿಯು. ಆತ್ಮನನ್ನು ತಿಳಿಯುವದೆಂದರೆ ಆತ್ಮನೇ ಇರುವದು. ದೇವರು ತನ್ನ ಸ್ವರೂಪಕ್ಕೆ ಅನ್ಯವಾಗಿ ಇರುವನು ಮತ್ತು ತಾನೇ ದೇಹವು ಎಂದು ತಿಳಿದುಕೊಳ್ಳುವದು ಮಹಾ ಅಪರಾಧವು. ಸುಖವನ್ನು ತನ್ನ ಆತ್ಮನ ಹೊರಗೆ ಹುಡುಕುವದು ಇನ್ನೊಂದು ಮಹಾ ಅಪರಾಧವು. ಈ ಎರಡು ಮಹಾ ಅಪರಾಧಗಳನ್ನು ಎಸಗಿದ್ದರಿಂದಲೇ ಮಾನವನು ಅಸಂಖ್ಯ, ಅನೇಕ ಪ್ರಕಾರದ ದು:ಖಗಳನ್ನು ಅಸಂಖ್ಯ ಜನ್ಮಗಳಲ್ಲಿ ಅನುಭವಿಸಬೇಕಾಗಿದೆ. ಗಾಢ ನಿದ್ರೆಯಲ್ಲಿ ಅನುಭವಿಸುವ ಆನಂದವನ್ನು ಯಾರೂ ಕಲಿಸಿಲ್ಲ. ಅದರಂತೆ ಆನಂದವನ್ನು ಯಾರೂ ಕಲಿಸಿಲ್ಲ. ಮಾನವನು ತನ್ನ ಪ್ರಥಮಾನುಭೂತಿಯಿಂದಲೇ ಆನಂದವನ್ನು ಅನುಭವಿಸಿದವನಾಗಿದ್ದಾನೆ. ತನ್ನ ಅರಿವೇ ತನ್ನ ಗುರು. ಪ್ರಾಚೀನ ಕಾಲದಿಂದ ಆತ್ಮಾನುಭವಿಗಳ ಮೂಲಕ ಅಧ್ಯಾತ್ಮ ಜ್ಮಾನವು ಮಾನವರಿಗೆ ಲಭ್ಯವಾಗಿದೆ. ಯಾರಾದರೂ ಗುರುವಿನ ಅವಶ್ಯಕತೆ ಇದೆ ಎಂದು ವಾದಿಸಿದರೆ ಆ ವಾದಕ್ಕೆ ಕೊನೆಯೇ ಇರುವದಿಲ್ಲ. ಕಡೆಗೆ ಮಾನವನು ತನ್ನ ಪ್ರಥಮಾನುಭೂತಿಗೆ ಮೊರೆಹೋಗಬೇಕಾಗುವದು. ಮಾನವನ ಪ್ರಥಮಾನುಭೂತಿಯಿಂದಲೇ ಅಧ್ಯಾತ್ಮ ಜ್ಞಾನ ಪ್ರವಾಹವು ಮುಂದುವರಿಯುತ್ತದೆ. ಆದರೆ ಮಾನವನು ತನ್ನ ಪ್ರಥಮಾನುಭೂತಿಯ ಮೂಲಕ ಅಥವಾ ಸ್ವರೂಪ ಜ್ಙಾನಿಗಳ ಅನುಭವ ವಾಣಿಗಳ ಮೂಲಕ ತನ್ನ ಸ್ವರೂಪದ ಸಂಶೋಧನೆಯನ್ನು ಮಾಡಿಕೊಂಡು ಅದರಲ್ಲಿ ನೆಲೆಯಾಗಿ ನಿಲ್ಲಬೇಕು.