ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಸ್ಚಾಮಿಗಳು ಆತ್ಮಾನುಭವಿಗಳಾಗಿದ್ದರು. ಅವರು ವೇದಾಂತ ತತ್ವಜ್ಞಾನದ ಮೂರ್ತಿಮಂತರಗಿದ್ದರು. ಸ್ವಾಮಿ ಆತ್ಮಾನಂದರು ಹಾಗೂ ಅವರ ತಂದೆಯವರಾದ ಪೂಜ್ಯ ಶ್ರೀ ಸದ್ಗುರು ಶಿವಾನಂದರು (ನಾಗನೂರ-ಗದಗ) ಶುಕದೇವ ಮತ್ತು ವ್ಯಾಸಮಹರ್ಷಿಗಳಿಂತಿದ್ದರು. ಆತ್ಮಾನಂದ ಸ್ಚಾಮಿಗಳು, ತಾವು ಅನುಭವಿಸಿದ ಶಾಶ್ವತ ಸುಖದ ಬೋಧೆಯನ್ನು ಅವರಿವರೆನ್ನದೆ ಭುವನದ ಮಾನವರೆಲ್ಲರಿಗೂ ಮೇಲು-ಕೀಳು, ಅಕ್ಷರಸ್ಥ-ಅನಕ್ಷರಸ್ಥ, ಶ್ರೀಮಂತ-ಬಡವ ಮುಂತಾದ ಭೇದ-ಭಾವವಿಲ್ಲದೆ 45 ವರ್ಷಗಳ ಕಾಲ ಲೋಕಕಲ್ಯಾಣಕ್ಕಾಗಿ ಬೋಧಿಸಿದರು. ಅವರು ವೇದಾಂತ ತತ್ವಜ್ಞಾನವನ್ನು ಅತಿ ಸರಳವಾದ ಕನ್ನಡ ಭಾಷೆಯಲ್ಲಿ ವಿವರಿಸಿದರು. ಯಾವುದೇ ಸಾಮಾನ್ಯ ಮಾನವನು ಕೂಡ ಅವರ ಪ್ರವಚನವನ್ನು ಸಹಜವಾಗಿ ತಿಳಿದುಕೊಳ್ಳಬಹುದಾಗಿತ್ತು. ಅವರು ಬೋಧಿಸಿದ ತತ್ವಗಳು ಶಾಶ್ವತ ಮತ್ತು ಸಾರ್ವತ್ರಿಕವಾಗಿವೆ. ಅವರು ಜೀವಿತದುದ್ದಕ್ಕೂ ಪ್ರತಿದಿನ ಮೂರ್ನಾಲ್ಕು ತಾಸುಗಳ ಕಾಲ ತೂರ್ಯಾವಸ್ಥೆಯನ್ನು ಹೊಂದಿಯೇ ತೀರುತ್ತಿದ್ದರು. ಅವರು ತಮ್ಮ ಭೌತಿಕ ಶರೀರ ಬಿಟ್ಟ ದಿನವಾದ 1983ರ ಡಿಸ್ವೆಂಬರ್ 19ರಂದು ಸಹ ಮುಂಜಾನೆ 8 ಗಂಟೆಯಿಂದ 11 ಗಂಟೆಯವರೆಗೆ ಸ್ವರೂಪದ ಅನುಷ್ಠಾನದಲ್ಲಿ ನಿರತರಾಗಿದ್ದರು. ಅವರು ತಾವು ಬೋಧಿಸಿದ ತತ್ವದಂತೆ ಜೀವಿಸಿದರು. ಅವರು ಅತಿ ಸಾದಾ ಸರಳ ಜೀವನ ಸಾಗಿಸಿದರು. ಅವರು ಪ್ರವಚನ ಕಾಲಕ್ಕೆ ನೀವು ದೇವರು ನಾನು ಪೂಜಾರಿ ನೀವು ಗುರುಗಳು ನಾನು ಶಿಷ್ಯ ಎಂದು ನೆರೆದವರಿಗೆ ಸಂಭೋಧಿಸುತ್ತಿದ್ದರು. ಇಂಥ ನಿರಭಿಮಾನಿ ಮಹಾತ್ಮರು ಅವರಾಗಿದ್ದರು.

ಎರಡು ಮುಖ್ಯ ಮಂತ್ರಗಳ ಕೊಡುಗೆ ಅವರದು. ಅವು ಯಾವವೆಂದರೆ "ಓಂ ನಮಃ ಸುಖಾಯ" ಮತ್ತು "ಓಂ ನಮೋ ನಾನವೆ". " ಓಂ ನಮಃ ಸುಖಾಯ" ಮಂತ್ರವು, ಎಲ್ಲ ಜೀವಿಗಳಿಗೆ ಬೇಕಾದದ್ದು ಶಾಶ್ವತ ಸುಖವು ಮತ್ತು ಅದು ರೂಪರಹಿತವಿದೆ. ಆದರೆ ಅಜ್ಞಾನಿ ಜೀವರು ರೂಪರಹಿತ ಸುಖವನ್ನು ದಃಖಮಯವಾದ ಸಾಕಾರ ವಸ್ತುಗಳಲ್ಲಿಯೇ ಹುಡುಕುತ್ತಾರೆ ಮತ್ತು ಅವುಗಳಿಗಾಗಿ ಜಗಳಾಡುತ್ತಾರೆ.

"ಓಂ ನಮೋ ನಾನವೆ" ಮಂತ್ರವು, ನಮ್ಮ ನಿಜ ಸ್ವರೂಪವೇ ಸುಖ ಅಥವಾ ಆನಂದ ಇರುವದು ಎಂದು ಬೋಧಿಸುತ್ತದೆ. ಆದರೆ ಅಜ್ಞಾನಿ ಜೀವರು ಸುಖವನ್ನು ತಮ್ಮ ನಿಜಸ್ವರೂಪವನ್ನು ಬಿಟ್ಟು ಹೊರಗೆ ಹುಡುಕುತ್ತಾರೆ. ಆದ್ದರಿಂದ ನಾವು ಶಾಶ್ವತ ಸುಖವನ್ನು ಹೊಂದಬೇಕಾದರೆ ನಮ್ಮ ಸ್ವರೂಪಜ್ಞಾನವನ್ನು ಮಾಡಿಕೊಳ್ಳಬೇಕು.

ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಆಶ್ರಮವು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಧಾರವಾಡದಿಂದ ಉತ್ತರಕ್ಕೆ 18 ಕಿ. ಮೀ. ದೂರದಲ್ಲಿರುವ ಹಂಗರಕಿ ಗ್ರಾಮದ ಪಶ್ಚಿಮದ ಮರಡಿಯ ಮೇಲೆ ಇರುವದು.

ಪೂಜ್ಯ ಶ್ರೀ ಗುರುದೇವ ಆತ್ಮಾನಂದರು 1966ರಲ್ಲಿ ಮೊದಲ ಬಾರಿಗೆ ಹಂಗರಕಿಗೆ ಆಗಮಿಸಿದರು. ನಂತರ ವರ್ಷದಲ್ಲಿ ಒಂದು ತಿಂಗಳವರೆಗೆ 4 ವರ್ಷಗಳ ಕಾಲ ಪ್ರತಿದಿನ ಮುಂಜಾನೆ-ಮಧ್ಯಾಹ್ನ್ನ-ಸಾಯಂಕಾಲ ಪ್ರವಚನಗೈದರು. ಹಂಗರಕಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗಾಗಿ ಆಶ್ರಮದ ಅವಶ್ಯಕತೆ ಇದೆ ಎಂದು ಅವರು ಸೂಚಿಸಿದರು. ಅವರ ಸೂಚನೆಯಂತೆ ಹಂಗರಕಿಯ ಶ್ರೀಮಂತ ಬಿ ಎ ದೇಸಾಯಿಯವರು ಗ್ರಾಮದ ಸಮೀಪವಿರುವ ತಮ್ಮ ಹೊಲದಲ್ಲಿ 1970ರಲ್ಲಿ ಆಶ್ರಮವನ್ನು ಕಟ್ಟಿಸಿದರು. ತದನಂತರ ಹಂಗರಕಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು 1981ರಲ್ಲಿ ಹಂಗರಕಿ ಗ್ರಾಮದ ಮರಡಿಯ ಮೇಲೆ ಆಶ್ರಮವನ್ನು ಕಟ್ಟಿದರು.

1966ನೇ ಇಸ್ವಿಯಿಂದ ಆತ್ಮಾನಂದ ಸ್ಚಾಮಿಗಳ ಭಕ್ತರು ದಿನಾಲು ಮುಂಜಾನೆ ಮತ್ತು ಸಾಯಂಕಾಲ ಅಧ್ಯಾತ್ಮ ಪ್ರವಚನಗಳನ್ನು ಇಲ್ಲಿಯವರೆಗೆ ನಡೆಸುತ್ತ ಬಂದಿದ್ದಾರೆ. ಆಶ್ರಮದಲ್ಲಿ ಅದರದೇ ಆದ ಒಂದು ಗ್ರಂಥಾಲಯವಿದೆ. ಈ ಗ್ರಂಥಾಲಯದಲ್ಲಿ ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಸ್ಚಾಮಿಗಳ ಎಲ್ಲ ಪ್ರವಚನ ಗ್ರಂಥಗಳು ಮತ್ತು ಅನೇಕ ವೇದಾಂತ ಗ್ರಂಥಗಳು ಇವೆ. ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಸ್ಚಾಮಿಗಳ ಶಿಷ್ಯರು ಧಾರವಾಡ, ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗಳ ವಿವಿದ ಸ್ಥಳಗಳಲ್ಲಿ ಅಧ್ಯಾತ್ಮ ಆಶ್ರಮಗಳನ್ನು ಸ್ಥಾಪಿಸಿದ್ದಾರೆ.

ನಮ್ಮ ಆಶ್ರಮದ ಗುರಿ ಏನೆಂದರೆ, ಭೌತಿಕವಾಗಿ, ಮಾನಸಿಕವಾಗಿ ಹಾಗೂ ಅಧ್ಯಾತ್ಮಿಕವಾಗಿ ಜೀವಿಗಳ ಸೇವೆಗೈಯುವದೇ ಆಗಿದೆ. ಉದಾಹರಣೆಗೆ, ಹಸಿದ ಜೀವಿಗಳಿಗೆ ಅನ್ನ ನೀಡುವದು, ಜೀವಿಗಳನ್ನು ನೈತಿಕವಾಗಿ ಪ್ರಗತಿಪರರನ್ನಾಗಿ ಮಾಡುವದು, ಜನರನ್ನು ವಿವೇಕ ವೈರಾಗ್ಯಗಳಿಂದ ಸಧೃಡ ಮನಸ್ಸುಳ್ಳವರನ್ನಾಗಿ ಪರಿವರ್ತಿಸುವದು ಮತ್ತು ಸತತ ಆತ್ಮಧ್ಯಾನದ ಮೂಲಕ ಆತ್ಮಜ್ಞಾನಿಗಳಾಗಲು ಪ್ರೇರೇಪಿಸುವದು.

ಈ ವೆಬ್ ಸೈಟ್ ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಸ್ಚಾಮಿಗಳ ಅಧ್ಯಾತ್ಮ ಬೋಧೆಯನ್ನು ಪ್ರಸಾರಗೊಳಿಸುವದಕ್ಕಾಗಿ ಮುಡಿಪಾಗಿದೆ. ಈ ಪ್ರಯುಕ್ತ ಪೂಜ್ಯರ ಕನ್ನಡ, ಇಂಗ್ಲೀಷ ಮತ್ತು ಮರಾಠಿ ಭಾಷೆಯಲ್ಲಿ ಪ್ರಕಟವಾಗಿರುವ ಗ್ರಂಥಗಳನ್ನು ಆನ್-ಲೈನ್ ಮುಖಾಂತರ ತಲುಪಿಸುವ ಪ್ರಯತ್ನ ಇದಾಗಿದೆ. ಇದರಲ್ಲಿ ಪೂಜ್ಯರ ಸಂಪೂರ್ಣ ಅಧ್ಯಾತ್ಮ ಕೃತಿಗಳಿವೆ (25- ಕನ್ನಡ, 9- ಇಂಗ್ಲೀಷ ಮತ್ತು 2-ಮರಾಠಿ).

ಅಲ್ಲದೆ, ಪೂಜ್ಯ ಶ್ರೀ ಗುರುದೇವ ಆತ್ಮಾನಂದ ಸ್ಚಾಮಿಗಳ ಭಾವಚಿತ್ರಗಳನ್ನು ಮತ್ತು ಲಭ್ಯವಿರುವ ಧ್ವನಿ ಸುರುಳಿಗಳನ್ನು ಈ ವೆಬ್ ಸೈಟ್ ಒಳಗೊಂಡಿರುತ್ತದೆ.